Wednesday, February 27, 2019

ಅಂದು ನಚಿಕೇತ, ಇಂದು ಅಭಿನಂದನ್! ತಪ್ಪದೇ ಈ ರೋಚಕ ಕಹಾನಿಯನ್ನ ಓದಿ..


ನೆನ್ನೆ ಭಾರತದ ವಾಯುಸೇನೆ ಪಾಕಿಸ್ತಾನದ ಮೇಲೆ ನಡೆಸಿದ್ದಂತಹ ಏರ್ ಸ್ಟ್ರೈಕ್ ನಿಂದ ಇಡೀ ಜಗತ್ತು ಬೆಚ್ಚಿ ಬಿದ್ದಿತ್ತು. ಪಾಕಿಸ್ತಾನಕ್ಕೆ ಪ್ರಬಲ ಹೊಡೆತವನ್ನು ಭಾರತದ ಸೇನೆ ನೀಡಿತ್ತು. ಇನ್ನು ಪ್ರತೀಕಾರಕ್ಕಾಗಿ ಇಂದು ಭಾರತದ ಮೇಲೆ ದಾಳಿ ಮಾಡಲು ಬಂದಿದ್ದಂತಹ ಪಾಕಿಸ್ತಾನದ ಯುದ್ಧ ವಿಮಾನವನ್ನು ಭಾರತೀಯ ವಾಯುಸೇನೆ ಇಂದು ಬೆಳಿಗ್ಗೆ ಹೊಡೆದುರುಳಿಸಿದೆ. ಇದೇ ವೇಳೆ ಭಾರತದ ಮಿಗ್-21 ಯುದ್ದವೂ ಪತನವಾಗಿದೆ. ವಿಮಾನದ ಪೈಲಟ್ ವಿಂಗ್ ಕಮ್ಯಾಂಡರ್ ಅಭಿನಂದನ್ ಎನ್ನುವವರು ಅಚಾನಕ್ ಆಗಿ ಪಾಕಿಸ್ತಾನದ ಸೇನೆಯಿಂದ ಬಂಧಿಯಾಗಿದ್ದಾರೆ. ಸದ್ಯ ಇದು ಎಲ್ಲೆಡೆ ಭಾರೀ ಚರ್ಚೆಗೆ ಒಳಗಾಗಿದೆ.

ಇದೇ ಸಂದರ್ಭದಲ್ಲಿ ಕುತೂಹಲಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ವಿಂಗ್ ಕಮ್ಯಾಂಡರ್ ಅಭಿನಂದನ್ ರಂತೆಯೇ ಅಂದು ಕೂಡಾ ಭಾರತೀಯ ಯೋಧರೊಬ್ಬರು ಪಾಕಿಸ್ತಾನದ ಸೇನೆಯ ಬಂಧನಕ್ಕೊಳಗಾಗಿದ್ದರು. 1999 ರಲ್ಲಿ ಭಾರತ ಪಾಕಿಸ್ತಾನ ನಡುವೆ ಕಾರ್ಗಿಲ್ ಯುದ್ಧ ನಡೆಯುತ್ತಿತ್ತು. ಯುದ್ಧದ ವೇಳೆ ಭಾರತೀಯ ಸೇನೆಯ ಲೆಫ್ಟಿನೆಂಟ್ ನಚಿಕೇತರವರನ್ನ ಪಾಕಿಸ್ತಾನದ ಸೇನೆ ಬಂಧಿಸಿತ್ತು‌. 26 ವರ್ಷದ ಫ್ಲೈಟ್ ಲೆಫ್ಟಿನೆಂಟ್ ಕೆ.ನಚಿಕೇತ ಮಿಗ್-27 ವಿಮಾನವನ್ನು ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಗುರಿಯಾಗಿಸಿ ಹಾರಿಸಿದ್ದರು.

ಆದರೆ ನಚಿಕೇತ ಅವರ ಗುರಿ ಸ್ವಲ್ಪದರಲ್ಲೇ ಮಿಸ್ ಆಗಿತ್ತು. ತಾಂತ್ರಿಕ ಕಾರಣದಿಂದ ನಚಿಕೇತ ಅವರಿಗೆ ವಿಮಾನದಿಂದ ಪ್ಯಾರಾಚೂಟ್​ ಮೂಲಕ ಹಾರಲಾಗಲಿಲ್ಲ. ಪಾರಾಗಲು ಯಾವುದೇ ಅವಕಾಶವಿಲ್ಲದೇ ನಚಿಕೇತ ಪಾಕ್ ಸೇನೆಗೆ ಶರಣಾಗಿದ್ದರು. 1999ರಂದು ನಚಿಕೇತ ಪಾಕಿಸ್ತಾನದ ವಶವಾಗಿದ್ದರು. ನಚಿಕೇತರನ್ನು ಬಂಧಿಸಿದ ಪಾಕ್ ಆರ್ಮಿ ನೇರವಾಗಿ ರಾವಲ್ಪಿಂಡಿಯ ಜೈಲಿಗೆ ಹಾಕಿತ್ತು. ಅಲ್ಲಿ ಮಾರಣಾಂತಿಕವಾಗಿ ಶಿಕ್ಷೆಯನ್ನು ನೀಡಿ ತನ್ನ ನರಿಬುದ್ಧಿ ತೋರಿಸಿತ್ತು. ಮೂರ್ನಾಲ್ಕು ದಿನ ದೈಹಿಕ ಹಾಗೂ ಮಾನಸಿಕವಾಗಿ ಪಾಕ್ ಜೈಲಿನಲ್ಲಿ ಹಿಂಸೆ ನೀಡಲಾಗಿತ್ತು.

ನಚಿಕೇತ ಅವರಿಗೆ ಮತ್ತೆ ತಾಯ್ನಾಡಿಗೆ ಬರುವ ಆಸೆ ಬಹುತೇಕ ಕಮರಿ ಹೋಗಿತ್ತು. ಸಾವು ನಿಶ್ಚಿತ ಎನ್ನುವ ಮನಸ್ಥಿತಿಗೆ ನಚಿಕೇತ ಬಂದಿದ್ದರು. ಆದರೆ ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರ ತನ್ನ ಪ್ರಜೆಯನ್ನು ರಕ್ಷಿಸಲು ಇನ್ನಿಲ್ಲದ ಶ್ರಮ ಪಟ್ಟಿತ್ತು. ಭಾರತ ರಾಜತಾಂತ್ರಿಕವಾಗಿ ಪಾಕಿಸ್ತಾನದ ಮೇಲೆ ಸಾಕಷ್ಟು ಒತ್ತಡವನ್ನು ತರಲು ಆರಂಭಿಸಿತ್ತು. ಹಲವು ದಿಗ್ಗಜ ರಾಷ್ಟ್ರಗಳು, ವಿಶ್ವಸಂಸ್ಥೆ ಸಹ ನಚಿಕೇತ ಬಿಡುಗಡೆ ಮಾಡುವಂತೆ ಪಾಕಿಸ್ತಾನಕ್ಕೆ ಆದೇಶಿಸಿತ್ತು. ಅಂತಿಮವಾಗಿ ಭಾರತಕ್ಕೆ ಜಯ ಸಿಕ್ಕಿತ್ತು.

ಭಾರೀ ಅಂತರರಾಷ್ಟ್ರೀಯ ಒತ್ತಡಗಳಿಗೆ ಪಾಕಿಸ್ತಾನ ಕೊನೆಗೂ ಶರಣಾಗಿತ್ತು. ಒಂದು ವಾರಗಳ ನಂತರ ನಚಿಕೇತ ಅವರನ್ನು ಬಿಡುಗಡೆ ಮಾಡಿತ್ತು. ವಾಘಾ ಗಡಿಯ ಮೂಲಕ ನಚಿಕೇತ ಅವರು ಭಾರತವನ್ನು ಪ್ರವೇಶಿಸಿದ್ದರು. ಭಾರತದೆಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ನಚಿಕೇತ ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಲಾಗಿತ್ತು. ನಚಿಕೇತ ಅವರ ಹೋರಾಟ ಶ್ರಮವನ್ನೆಲ್ಲಾ ಗುರುತಿಸಿದ್ದ ಅಟಲ್ ಸರ್ಕಾರ ವಾಯು ಸೇನಾ ಪದಕ ನೀಡಿ ಗೌರವಿಸಿತ್ತು. ನಂತರ ಸತತ ಮೂರು ವರ್ಷಗಳ ಕಾಲ ನಚಿಕೇತ ರವರಿಗೆ ಮತ್ತದೇ ಯುದ್ಧ ವಿಮಾನದಲ್ಲಿ ಪೈಲಟ್ ಆಗಿ ಕರ್ತವ್ಯಕ್ಕೆ ಸರ್ಕಾರ ನೇಮಿಸಿಕೊಂಡಿತ್ತು.

ಅಂದು ನಚಿಕೇತ ಅವರು ಕೂಡ ಮಿಗ್ ವಿಮಾನದಲ್ಲಿಯೇ ಹೋರಾಡುವಾಗ ಪಾಕಿಸ್ತಾನದ ಸೇನೆಯ ಕೈಯಲ್ಲಿ ಬಂಧಿತರಾಗಿದ್ದರು. ಇಂದು ವಿಂಗ್ ಕಮಾಂಡರ್ ಅಭಿನಂದನ್ ಕೂಡ ಅದೇ ಮಿಗ್ ವಿಮಾನದಲ್ಲಿ ಕಾರ್ಯಾಚರಣೆ ನಡೆಸುವಾಗಲೇ ಪಾಕ್ ಸೇನೆಗೆ ಸೆರೆಸಿಕ್ಕಿದ್ದಾರೆ. ಪಾಕ್ ಪ್ರಜೆಗಳಿಂದ ಹೊಡೆತ ತಿಂದರೂ, ಬಂಧಿಯಾಗಿದ್ದರು ಕೂಡ ಅಭಿನಂದನ್ ಅವರ ಮುಖದಲ್ಲಿದ್ದ ನಗು ದೇಶದ ಜನರಲ್ಲಿ ಹೆಮ್ಮೆ ಮೂಡುವಂತೆ ಮಾಡಿದೆ. ಅಭಿನಂದನ್ ಅವರು ನಚಿಕೇತ ಅವರಂತೆಯೇ ಖಂಡಿತ ಭಾರತಕ್ಕೆ ಅತಿ ಶೀಘ್ರದಲ್ಲಿ ಹಿಂದಿರುಗುತ್ತಾರೆ ಎನ್ನುವ ವಿಶ್ವಾಸ ರಾಷ್ಟ್ರದೆಲ್ಲೆಡೆ ಮೂಡಿದೆ. ಇನ್ನು ಭಾರತ ಸರ್ಕಾರ ಕೂಡ ತನ್ನ ಪ್ರಜೆಯನ್ನು ಕ್ಷೇಮವಾಗಿ ತಾಯ್ನಾಡಿಗೆ ಕರೆದುಕೊಂಡು ಬರಲು ಕ್ರಮಗಳನ್ನು ಕೈಗೊಳ್ಳುತ್ತಿದೆ.

No comments:

Post a Comment