Friday, March 1, 2019

ಪಾಕಿಸ್ತಾನಕ್ಕೆ ಭಾರಿ ಮುಖಭಂಗ, ಓಐಸಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ಅದರ ಸಭೆಯಲ್ಲಿ ಭಾಗಿಯಾಗುತ್ತಿದೆ.

ಇಸ್ಲಾಮಿಕ್ ಸಹಕಾರ ಸಂಘಟನೆಯ ಸಭೆಯಲ್ಲಿ ಭಾರತ ಭಾಗಿ; ಪಾಕ್ ಬಹಿಷ್ಕಾರ; ಇದು ಇತಿಹಾಸದಲ್ಲೇ ಮೊದಲು

ಓಐಸಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ಅದರ ಸಭೆಯಲ್ಲಿ ಭಾಗಿಯಾಗುತ್ತಿದೆ. ಸದಸ್ಯ ರಾಷ್ಟ್ರವಲ್ಲದ ಭಾರತಕ್ಕೆ ಆಹ್ವಾನ ಕೊಟ್ಟಿರುವುದು ಪಾಕಿಸ್ತಾನಕ್ಕೆ ಮುಜುಗರ ತಂದಿದೆ.

ನವದೆಹಲಿ(ಮಾ. 01): ಅಬುಧಾಬಿಯಲ್ಲಿ ಇವತ್ತು ಮತ್ತು ನಾಳೆ ನಡೆಯಲಿರುವ ಇಸ್ಲಾಮಿಕ್ ಸಹಕಾರ ಸಂಘಟನೆ (ಓಐಸಿ) ಸಭೆಯಲ್ಲಿ ಭಾರತ ಭಾಗಿಯಾಗಿದೆ. ಪಾಕಿಸ್ತಾನದ ತೀವ್ರ ಆಕ್ಷೇಪಗಳ ಮಧ್ಯೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಓಐಸಿಯ ಭಾಗವಾಗಿಲ್ಲದ ಭಾರತವನ್ನು ಈ ಸಭೆಗೆ ಆಹ್ವಾನಿಸಿದ್ದು ಯಾಕೆ ಎಂದು ಪ್ರಶ್ನಿಸಿರುವ ಪಾಕಿಸ್ತಾನವು ತಾನು ಈ ಸಭೆಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದೆ. ಆದರೆ, ಐಐಸಿಯ ಇತರ ಸದಸ್ಯ ರಾಷ್ಟ್ರಗಳು ಪಾಕಿಸ್ತಾನದ ಮಾತನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ, ಭಾರತ ಈ ಸಭೆಯಲ್ಲಿ ಪಾಲ್ಗೊಳ್ಳುವುದು ನಿಶ್ಚಿತ. ಸುಷ್ಮಾ ಸ್ವರಾಜ್ ಅವರು ಈಗಾಗಲೇ ಯುಎಇ ನೆಲದಲ್ಲಿದ್ದು, ಇವತ್ತು ಸಭೆಯನ್ನುದ್ದೇಶಿ ಅವರು ಮಾತನಾಡಲಿದ್ದಾರೆ. ಜೊತೆಗೆ ಕೆಲ ಸದಸ್ಯ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನೂ ನಡೆಸುವ ನಿರೀಕ್ಷೆ ಇದೆ.

ಇಸ್ಲಾಮಿಕ್ ರಾಷ್ಟ್ರಗಳ ಒಂದು ಸಂಘಟನೆಯಾಗಿರುವ ಓಐಸಿಯ ಸಭೆಯೊಂದಕ್ಕೆ ಭಾರತಕ್ಕೆ ಆಹ್ವಾನ ಕೊಟ್ಟಿರುವುದು ಇದೇ ಮೊದಲು. ಟರ್ಕಿ ಮತ್ತು ಬಾಂಗ್ಲಾದೇಶ ದೇಶಗಳು ಭಾರತಕ್ಕೆ ಆಹ್ವಾನ ಕೊಡಲು ಮೊದಲು ಪ್ರಸ್ತಾಪಿಸಿದ್ದು.


ಈಗ ನಡೆಯುತ್ತಿರುವುದು ಐಓಸಿಯ 50ನೇ ವಾರ್ಷಿಕ ಸಭೆಯಾದ್ದರಿಂದ ಇದಕ್ಕೆ ಸ್ವಲ್ಪ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ರಷ್ಯಾ ಮತ್ತು ಥಾಯ್ಲೆಂಡ್ ದೇಶಗಳು ಈ ಸಭೆಯಲ್ಲಿ ವೀಕ್ಷಕರಾಗಿ (ಅಬ್ಸರ್ವರ್ಸ್) ಭಾಗಿಯಾಗುತ್ತಿವೆ. 50 ವರ್ಷಗಳ ಹಿಂದೆಯೂ ಭಾರತಕ್ಕೆ ಆಹ್ವಾನ ಇತ್ತಾದರೂ ಬೇರೆ ಬೇರೆ ಕಾರಣಗಳಿಂದ ಕೊನೆ ಘಳಿಗೆಯಲ್ಲಿ ಭಾರತವನ್ನು ಸಭೆಗೆ ಬರದಂತೆ ತಡೆಯಲಾಗಿತ್ತು.

ಈಗ ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮೆಹ್ಮೂದ್ ಖುರೇಷಿ ಅವರು ತಾವು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಓಐಸಿಯಲ್ಲಿ ಪಾಕಿಸ್ತಾನದ ನಿರ್ಣಯಗಳ ವಿಚಾರದಲ್ಲಿ ನಿಗಾ ಇಡಲು ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಭಾರತವನ್ನು ಯಾಕೆ ಆಹ್ವಾನಿಸಲಾಗಿದೆ ಎಂದು ಪಾಕಿಸ್ತಾನ ವ್ಯಕ್ತಪಡಿಸಿದ ಆಕ್ಷೇಪವನ್ನು ಬೇರೆ ರಾಷ್ಟ್ರಗಳು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ, ಭಾರತವನ್ನು ಆಹ್ವಾನಿಸಿರುವುದು ಯುಎಇ ಮತ್ತು ಟರ್ಕಿ ದೇಶಗಳಿಗೆ ಇಷ್ಟವಿಲ್ಲವೆಂದು ಪಾಕಿಸ್ತಾನ ಹೇಳಿಕೊಂಡಿದೆ. ಪುಲ್ವಾಮ ದಾಳಿ ಘಟನೆ ನಡೆಯುವ ಮೊದಲೇ ಭಾರತಕ್ಕೆ ಈ ಸಭೆಗೆ ಬರುವಂತೆ ಆಹ್ವಾನಿಸಲಾಗಿತ್ತು. ಈಗ ನಿರ್ಧಾರ ಬದಲಿಸಲು ಕಷ್ಟಸಾಧ್ಯ ಎಂದು ಟರ್ಕಿ ಮತ್ತು ಯುಎಇ ದೇಶಗಳು ತಮ್ಮ ಬಳಿ ಅಸಹಾಯಕತೆ ತೋಡಿಕೊಂಡಿವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರು ಹೇಳಿದ್ದಾರೆ.

No comments:

Post a Comment