ಇಸ್ಲಾಮಾಬಾದ್, ಫೆ.28-ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ನಾಳೆ ಸುರಕ್ಷಿತವಾಗಿ ಬಿಡುಗಡೆ ಮಾಡುವುದಾಗಿ ಪಾಕ್ ಹೇಳಿದೆ. ಇಂದು ಪಾಕ್ ಸಂಸತ್ ನಲ್ಲಿ ಮಾತನಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ನಾಳೆ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಸಂಸತ್ ನಲ್ಲಿ ಮಾತನಾಡಿದ ಇಮ್ರಾನ್ ಖಾನ್ ನಾವು ಶಾಂತಿ ಬಯಸುತ್ತೇವೆ, ಇದಕ್ಕೆ ಸಾಕ್ಷಿಯಾಗಿ ಅಭಿನಂದನ್ ಅವರನ್ನು ಬಿಡುಗಡೆ ಮಾಡಲಿದ್ದೇವೆ, ಆದರೆ ಭಾರತ ಇದನ್ನು ನಮ್ಮ ದೌರ್ಬಲ್ಯ ಅಂದು ಭಾವಿಸದೆ, ಮಾತು ಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ.
ಬಿಡುಗಡೆಗಾಗಿ ವ್ಯಾಪಕ ಒತ್ತಡಕ್ಕೆ ಮಣಿದಿರುವ ಪಾಕ್ ಪ್ರಧಾನಿ ಇಮ್ರಾನ್‍ಖಾನ್ ಶಾಂತಿ ಮಾತುಕತೆ ಪ್ರಸ್ತಾಪ ಮಂಡಿಸುವ ಜೊತೆಗೆ ಪೈಲಟ್‍ನನ್ನು ಭಾರತಕ್ಕೆ ಕಳುಹಿಸುವ ಮಾತನಾಡಿದ್ದಾರೆ.
ಈ ಮೂಲಕ ಭಾರತಕ್ಕೆಮೊದಲ ರಾಜತಾಂತ್ರಿಕ ಗೆಲುವು ಸಿಕ್ಕಂತಾಗಿದೆ. ಅಭಿನಂದನ್ ಬಿಡುಗಡೆಗಾಗಿ ದೇಶದಾದ್ಯಂತ ಪ್ರಾರ್ಥನೆ ಮಾಡಲಾಗಿತ್ತು.
ಫೆ.14ರ ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಫೆಬ್ರವರಿ 26ರಂದು ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ಕ್ಯಾಂಪ್ ಗಳನ್ನು ಧ್ವಂಸ ಮಾಡಿ ಯಶಸ್ವಿಯಾಗಿ ಹಿಂದಿರುಗಿದ್ದವು.
ಇದಕ್ಕೆ ಪ್ರತಿಯಾಗಿ ಫೆಬ್ರವರಿ 27ರಂದು ಬೆಳಗ್ಗೆ ಪಾಕಿಸ್ತಾನದ ಮೂರು ಎಫ್-16 ಯುದ್ಧ ವಿಮಾನಗಳು ವಾಯುಸೀಮೆಯನ್ನು ದಾಟಿ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿತ್ತು. ಈ ವೇಳೆ ಭಾರತೀಯ ವಾಯುಸೇನೆಯ ಮಿಗ್-21 ಹಾಗೂ ಸುಖೋಯ್ ಯುದ್ಧ ವಿಮಾನಗಳು ಎಫ್-16ಗೆ ಮುಖಾಮುಖಿಯಾಗಿದ್ದವು.
ಭಾರತೀಯ ಯುದ್ಧ ವಿಮಾನಗಳು ಕಂಡ ತಕ್ಷಣ ಎಫ್-16 ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಕ್ಕೆ ಪಲಾಯನ ಮಾಡುವ ವೇಳೆ ಮಿಗ್-21 ಹಾಗೂ ಸುಖೋಯ್ ವಿಮಾನ ಹಿಂದೆ ನುಗ್ಗಿ ಒಂದು ಎಫ್-16 ವಿಮಾನವನ್ನು ಹೊಡೆದುರುಳಿಸಿತ್ತು.
ಈ ವೇಳೆ ಮಿಗ್-21 ಹಾರಿಸುತ್ತಿದ್ದ ಅಭಿನಂದನ್ ವರ್ತಮಾನ್ ಅವರು ಎಫ್-16 ಅನ್ನು ಅಡ್ಡಗಟ್ಟಿ ಹೊಡೆದುರುಳಿಸಬೇಕು ಅನ್ನುವ ಯೋಚನೆಯಿಂದ ಅಭಿನಂದನ್ ತಮ್ಮ ವಿಮಾನವನ್ನು ಎಫ್-21 ಬೆನ್ನಟ್ಟಿ ಹೋಗುತ್ತಿದ್ದರು. ಈ ವೇಳೆ ಸುಖೋಯ್ ಯುದ್ಧ ವಿಮಾನ ಒಂದು ಎಫ್-16 ಅನ್ನು ಹೊಡೆದುರುಳಿಸಿತು.
ಅಷ್ಟರಲ್ಲಿ ಅಭಿನಂದನ್ ಹಾರಿಸುತ್ತಿದ್ದ ಮಿಗ್-21 ಅನ್ನು ಭಾರತ ಗಡಿದಾಟಿ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿತ್ತು. ಈ ವೇಳೆ ಪಾಕಿಸ್ತಾನ ಕಡೆಯಿಂದ ಕ್ಷಿಪಣಿಯೊಂದು ಬಂದು ಮಿಗ್-21 ಗೆ ಬಡಿಯಿತು. ಈ ವೇಳೆ ಅಭಿನಂದನ್ ವಿಮಾನದಿಂದ ಜಿಗಿದಿದ್ದರು, ಆಗ ಅವರನ್ನು ಬಂಧಿಸಲಾಗಿತ್ತು.

No comments:
Post a Comment