Wednesday, March 20, 2019

ಒಂದು ರಾಜಕೀಯ ಪಕ್ಷ ಇದಕ್ಕಿಂತ ಕೆಳಗಿಳಿಯಲು ಸಾಧ್ಯವಿದೆಯೆ?

ಒಂದು ರಾಜಕೀಯ ಪಕ್ಷ ಇದಕ್ಕಿಂತ ಕೆಳಗಿಳಿಯಲು ಸಾಧ್ಯವಿದೆಯೆ?

ಮನೋಹರ್ ಪಾರಿಕರ್ ಅವರ ನಿಧನವಾಗಿ ಇನ್ನೂ ಸರಿಯಾಗಿ ಎರಡು ತಾಸುಗಳೂ ಆಗಿರಲಿಲ್ಲ.

'ಬಿಜೆಪಿ ಜೊತೆ ಕೈಜೋಡಿಸಿ, ಬಿಜೆಪಿ ನೇತೃತ್ವದ ಸರಕಾರ ಗೋವಾದಲ್ಲಿ ರಚನೆಯಾಗಲು ಕಾರಣರಾದ ಎಮ್ಮೆಲ್ಲೆಗಳು/ಬಿಡಿಪಕ್ಷಗಳು ಆಗ ಬಿಜೆಪಿಯನ್ನು ಬೆಂಬಲಿಸಲು ಮುಂದೊಡ್ಡಿದ್ದ ಷರತ್ತು ಏನೆಂದರೆ ಮನೋಹರ್ ಪಾರಿಕರ್ ಮುಖ್ಯಮಂತ್ರಿಯಾಗಬೇಕೆಂಬುದು. ಆ ಕಾರಣಕ್ಕಾಗಿ ಪಾರಿಕರ್, ಕೇಂದ್ರ ಸಚಿವ ಸ್ಥಾನ ತೊರೆದು ಗೋವಾಗೆ ವಾಪಸ್ ಬಂದಿದ್ದರು. ಆದರೆ, ಈಗ ಅವರಿಲ್ಲ. ಆದ್ದರಿಂದ, ಬಿಜೆಪಿ ಜೊತೆ ನಿಂತಿದ್ದ ಪಕ್ಷಗಳನ್ನು ಆಡಳಿತಾರೂಢ ಸರಕಾರದ ಭಾಗ ಎಂದು ಪರಿಗಣಿಸಬಾರದು. ಅವರನ್ನೆಲ್ಲ ಹೊರಗಿಟ್ಟರೆ ಬಿಜೆಪಿಗೆ ಇರುವ ಸ್ಥಾನಗಳು ಹನ್ನೊಂದು ಮಾತ್ರ. ನಮಗೋ ೧೪ ಸ್ಥಾನ ಇವೆ. ಆದ್ದರಿಂದ ಸರಕಾರ ರಚಿಸಲು ನಮ್ಮನ್ನು ಆಮಂತ್ರಿಸಬೇಕು'
- ಎಂದು ಕಾಂಗ್ರೆಸ್ ಗೋವಾದ ರಾಜ್ಯಪಾಲರಿಗೆ ಪತ್ರ ರವಾನಿಸಿದೆ.

ಇದೆಲ್ಲ ನಡೆದಿರುವುದು ಮುಖ್ಯಮಂತ್ರಿಗಳ ಪಾರ್ಥಿವ ಶರೀರ ಸಂಸ್ಕಾರವಾಗುವುದಕ್ಕೆ ಮೊದಲೇ!

ಒಂದೆರಡು ತಿಂಗಳ ಹಿಂದೆ ಈ ಪುರಾತನ ರಾಷ್ಟ್ರೀಯ ಪಕ್ಷದ ಅಧ್ಯಕ್ಷ, ಪಾರಿಕರ್ ಜೊತೆ ಹೇಗೆ ವರ್ತಿಸಿದ್ದ ಎಂಬುದನ್ನು ಈಗೊಮ್ಮೆ ಜ್ಞಾಪಿಸಿಕೊಳ್ಳಿ.

ಮನೋಹರ್ ಪಾರಿಕರ್ ಅವರ ಜೀವನ:

ಸಾವು ಯಾರಿಗೆ ಇಲ್ಲ ಹೇಳಿ… ಹುಟ್ಟಿದ ಪ್ರತಿಯೊಂದು ಜೀವಿಯೂ ಸಾಯಲೇಬೇಕು. ಅಂತಹ ಜೀವಿಗಳಲ್ಲಿ ಹುಟ್ಟಿದ ಮೇಲೆ ಏನಾದರೊಂದು ಸಾಧನೆ ಮಾಡಿ ನಾಲ್ಕು ಜನರು ಹೊಗಳುವಂತಾದರೆ ಮನುಷ್ಯ ಎಂಬ ಜೀವಿಯಾಗಿ ಹುಟ್ಟಿರುವುದಕ್ಕೆ ಸಾರ್ಥಕ. ಕೆಲ ಸಾಮಾನ್ಯ ವ್ಯಕ್ತಿಗಳು ಅಸಾಮಾನ್ಯರಂತೆ ವರ್ತಿಸಿದರೆ ಅಸಾಮಾನ್ಯ ಸಾಧನೆ ಮಾಡಿದ ವ್ಯಕ್ತಿಗಳು ಜನಸಾಮಾನ್ಯರಂತೆ ಜೀವಿಸುತ್ತಾರೆ. ಅಂತಹ ಅಪರೂಪದ ವ್ಯಕ್ತಿಗಳ ಪೈಕಿ ಸದ್ಯ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಮನೋಹರ್ ಪರಿಕ್ಕರ್ ಜೀ. ‌ಹೌದು ವೈಯಕ್ತಿಕವಾಗಿಯೂ ರಾಜಕೀಯವಾಗಿಯೂ ಇವರನ್ನು ಪ್ರೀತಿಸುವವರೇ ಹೆಚ್ಚು, ಒಂದು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡರೂ ಯಾವತ್ತೂ ರಾಜಕೀಯ ಮಾಡಿದವರಲ್ಲ, ರಾಜಕೀಯವಾಗಿ ತನ್ನ ಮೇಲೆ ಟೀಕೆಗಳು ಬಂದರೂ ತಲೆಕೆಡಿಸಿಕೊಂಡವರಲ್ಲ, ರಾಜಕೀಯವಾಗಿ ಯಾರೇ ನಿಂದಿಸಿದರೂ ಅದಕ್ಕೆ ಪ್ರತಿಕ್ರಿಯೆ ನೀಡಿದವರಲ್ಲ. ಇಂತಹ ಒಂದು ಅಪರೂಪದ ವ್ಯಕ್ತಿ ಪರಿಕ್ಕರ್ ಜೀ, ಆದರೆ ಇಂದು ಆ ಅಪರೂಪದ ಮಾಣಿಕ್ಯ ಮರಳಿ ಬಾರದ ಲೋಕಕ್ಕೆ ತೆರಳಿದೆ. ತನ್ನ ಬದುಕು ಇನ್ನೊಬ್ಬರಿಗೆ ಮಾದರಿಯಾಗಲಿ ಎಂದು ಬಯಸುವವರು ಅನೇಕರು ಸಿಗುತ್ತಾರೆ, ಆದರೆ ಮಾದರಿಯನ್ನಾಗಿಸುವವರು ಕೆಲವೇ ಕೆಲವರು ಮಾತ್ರ. ಆ ಕೆಲವರ ಪೈಕಿ ಪರಿಕ್ಕರ್ ಜೀ ನಮಗೆ ಕಾಣ ಸಿಗುತ್ತಾರೆ ಯಾಕೆಂದರೆ ಇವರ ಬದುಕೇ ಮತ್ತೊಬ್ಬರಿಗೆ ಮಾದರಿಯಾಗಿದೆ.

ಒಂದು ಸಣ್ಣ ಅಧಿಕಾರ ಸಿಕ್ಕರೆ ಸಾಕು ಏನೋ ಸಾಧಿಸಿದಂತೆ ವರ್ತಿಸುವ ಜನಗಳ ನಡುವೆ ದೇಶದ ಅತ್ಯುನ್ನತ ಮಟ್ಟದ ರಕ್ಷಣಾ ಸಚಿವ ಸ್ಥಾನ ಸಿಕ್ಕರೂ ತನ್ನ ಸಾಮಾನ್ಯ ಜೀವನಕ್ಕೆ ಕೊನೆ ಹಾಡಿರಲಿಲ್ಲ ಇವರು. ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಬರೋಬ್ಬರಿ ೪ನೇ ಬಾರಿ ಆಯ್ಕೆ ಆದಾಗಲೂ ಇವರ ಮುಖದಲ್ಲಿ ಮಾತ್ರ ಒಂಚೂರು ಅಧಿಕಾರದ ಅಮಲು ಕಾಣಲಿಲ್ಲ, ತಾನು ನಡೆದುಕೊಂಡು ಬಂದ ದಾರಿಯಲ್ಲಿ ಸಿಗುವ ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಬಯಸುತ್ತಿದ್ದ ಪರಿಕ್ಕರ್ ಜೀ ಸಾವು ಕಣ್ಣ ಮುಂದೆ ಇದ್ದರೂ ತನ್ನ ಕರ್ತವ್ಯವನ್ನು ಮಾತ್ರ ಮರೆಯಲೇ ಇಲ್ಲ. ಸಾಯುವ ದಿನ ಕೂಡ ಹಲವಾರು ಸರಕಾರದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಇಂದಿನ ವೇಳಾಪಟ್ಟಿ ಕೂಡ ನಿಗಧಿಪಡಿಸಿದ್ದರು ಎಂದರೆ ನಾವು ಅರ್ಥ ಮಾಡಿಕೊಳ್ಳಬೇಕು ಇವರೆಂತಹ ಮಹಾನ್ ವ್ಯಕ್ತಿ ಎಂದು.!

ಸಾವಿಗೂ ಅಂಜದ ನಾಯಕನೀತ!

ಕೆಲವರು ಅಧಿಕಾರಕ್ಕಾಗಿ ಯಾವ ರೀತಿಯ ನಾಟಕ ಆಡುತ್ತಾರೆ ಎಂದರೆ ಒಂಚೂರು ತಲೆ ನೋವು ಬಂದರೆ ಸಾಕು ಜನರ ಮುಂದೆ ನಿಂತು ಕಣ್ಣೀರಿಡಲು ಆರಂಭಿಸುತ್ತಾರೆ. ಒಂಚೂರು ಜ್ವರ ಬಂದರೆ ಸಾಕು ತಿಂಗಳುಗಟ್ಟಲೆ ರಜೆ ಮಾಡಿ ವಿದೇಶಕ್ಕೆ ವಿಶ್ರಾಂತಿಗೆ ತೆರಳುವ ನಾಯಕರ ನಡುವೆ ಪರಿಕ್ಕರ್ ಜೀ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ. ಯಾವ ಕ್ಷಣ ಬೇಕಾದರೂ ಸಾಯಬಹುದು ಎಂಬ ಎಚ್ಚರಿಕೆ ವೈದ್ಯರು ನೀಡಿದರೂ ಕೂಡ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಪರಿಕ್ಕರ್ ಜೀ ಮೂಗಿಗೆ ಪೈಪ್ ಹಾಕಿಕೊಂಡೇ ಬಜೆಟ್ ಮಂಡನೆ ಕೂಡ ಮಾಡಿದ್ದರು ಮತ್ತು ಎಲ್ಲಾ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕರ್ತವ್ಯ ಪ್ರಜ್ಞೆ ಮರೆಯಲಿಲ್ಲ. ಆದರೆ ಇದೀಗ ಪರಿಕ್ಕರ್ ಜೀ ವಿಧಿವಶರಾಗಿದ್ದಾರೆ ಮತ್ತು ದೇಶಕ್ಕೆ ಆಘಾತದ ಸುದ್ಧಿ ನೀಡಿದ್ದಾರೆ.

ಸಂಘದ ಹಿನ್ನೆಲೆಯುಳ್ಳ ವ್ಯಕ್ತಿ ದೇಶಕ್ಕೆ ಮಾದರಿ!

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯುಳ್ಳ ವ್ಯಕ್ತಿ ಯಾರೇ ಆಗಿರಲಿ ಆತ ಸಮಾಜಕ್ಕೆ ಒಳ್ಳೆಯದನ್ನೇ ಬಯಸುತ್ತಾನೆ ಮತ್ತು ದೇಶದ ಹಿತವನ್ನೇ ಬಯಸುತ್ತಾನೆ ಎಂಬುದು ಪರಿಕ್ಕರ್ ಜೀ ಅವರನ್ನು ನೋಡಿ ಅರ್ಥ ಮಾಡಿಕೊಳ್ಳಬೇಕು. ವಿಶೇಷವೆಂದರೆ ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲು ಹೆಸರು ಸೂಚಿಸಿದ್ದೇ ಪರಿಕ್ಕರ್ ಜೀ. ಇದು ನಂಬಲಾರದ ಸತ್ಯ, ಯಾಕೆಂದರೆ 2013ರಲ್ಲಿ ಬಿಜೆಪಿಯ ಅಭ್ಯರ್ಥಿ ಹೆಸರು ಸೂಚಿಸುವ ಸಂದರ್ಭದಲ್ಲಿ ಮನೋಹರ್ ಪರಿಕ್ಕರ್ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಹೆಸರನ್ನು ಸೂಚಿಸುತ್ತಾರೆ. ಅಂದು ಅವರು ಸೂಚಿಸಿದ ವ್ಯಕ್ತಿ ಇಂದು ವಿಶ್ವನಾಯಕನಾಗಿ ಬೆಳೆದು ನಿಂತಿದ್ದಾರೆ ಎಂದರೆ ಪರಿಕ್ಕರ್ ಜೀ ಅವರ ದೂರದೃಷ್ಟಿ ಯಾವ ರೀತಿ ಇತ್ತು ಎಂಬುದು ಅರಿವಾಗುತ್ತದೆ. ಗೋವಾ ಮುಖ್ಯಮಂತ್ರಿಯಾಗಿದ್ದ ಪರಿಕ್ಕರ್ ಅವರನ್ನು ಮೋದಿ ಪ್ರಧಾನಿಯಾದ ಕೂಡಲೇ ದೇಶದ ರಕ್ಷಣಾ ಸಚಿವರಾಗಿ ನೇಮಕ ಮಾಡುತ್ತಾರೆ, ತನ್ನ ಅಧಿಕಾರದ ಅವಧಿಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ರಕ್ಷಣಾ ವ್ಯವಸ್ಥೆಯಲ್ಲಿ ಬದಲಾವಣೆ ತಂದ ಪರಿಕ್ಕರ್ ಗೋವಾ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕ.

ಸ್ವತಃ ವಿಪಕ್ಷಗಳೇ ಮೆಚ್ಚಿಕೊಳ್ಳುವಂತಹ ನಾಯಕ ಪರಿಕ್ಕರ್ ಜೀ. ಸರಕಾರ ರಚನೆ ಮಾಡುವಷ್ಟು ಸ್ಥಾನಗಳನ್ನು ಬಿಜೆಪಿ ಗಳಿಸದ ಸಂದರ್ಭದಲ್ಲೂ ಇತರ ಪಕ್ಷಗಳು ಪರಿಕ್ಕರ್ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದರೆ ನಮ್ಮ ಬೆಂಬಲ ಇದೆ ಎಂದು ಹೇಳಿಕೊಂಡಿದ್ದರು. ಇಂತಹ ಒಂದು ವ್ಯಕ್ತಿತ್ವ ಪರಿಕ್ಕರ್ ಅವರದು. ಅದೇನೇ ಇರಲಿ ಪರಿಕ್ಕರ್ ಜೀ ರಂತಹ ವ್ಯಕ್ತಿಗಳು ಬಹಳ ಅಪರೂಪಕ್ಕೆ ಸಿಗುತ್ತಾರೆ, ತಮ್ಮ ಬದುಕನ್ನೇ ದೇಶಕ್ಕೆ ಮೀಸಲಿಡುತ್ತಾರೆ. ಇಂದು ಪರಿಕ್ಕರ್ ಜೀ ನಮ್ಮನ್ನೆಲ್ಲ ಅಗಲಿದ್ದಾರೆ, ಆದರೆ ಅವರ ಆದರ್ಶ ಪ್ರರೂಪಗಳು ಮಾತ್ರ ನಮ್ಮಲ್ಲೇ ಇದೆ ಎಂಬುದಂತು ಸತ್ಯ..!

No comments:

Post a Comment